ಚಿಂತಾಮಣಿ, ಚಿರ್ರವೂರಿ ಯಜ್ಞೇಶ್ವರ
1880-1941 ಪ್ರತಿಭಾವಂತ ಪತ್ರಿಕೋದ್ಯಮಿ, ರಾಜಕಾರಣಿ, ಲೇಖಕ, ಆಂಧ್ರಪ್ರದೇಶದ ವಿಜಯನಗರಂನಲ್ಲಿ ಜನನ, ಅಲ್ಲೇ ವಿದ್ಯಾಭ್ಯಾಸ. ಕೇವಲ 18ನೆಯ ವಯಸ್ಸಿನಲ್ಲಿ ವೈಜಾಗ್ ಸ್ಪೆಕ್ಟೇಟರ್ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸಮಾಡಿ, ಅಲಹಾಬಾದಿಗೆ ಬಂದು ಅಲ್ಲಿಯ ಇಂಡಿಯನ್ ಪೀಪಲ್ ಎಂಬ ಪತ್ರಿಕೆ ಸೇರಿದರು. ಅಲ್ಲೇ 1909ರಲ್ಲಿ ಲಿಬರಲ್ ಪಕ್ಷದ ಅಂಗವಾಗಿ ಲೀಡರ್ ಎಂಬ ಇಂಗ್ಲಿಷ್ ದಿನಪತ್ರಿಕೆ ಸ್ಥಾಪನೆಯಾದಾಗ ಅದನ್ನು ಸೇರಿಕೊಂಡು. 1910ರಲ್ಲಿ ಅದರ ಮುಖ್ಯ ಸಂಪಾದಕರಾಗಿ ನೇಮಕವಾಗಿ ತಮ್ಮ ಪ್ರತಿಭೆಯಿಂದ ಆ ಪತ್ರಿಕೆಯ ಯಶಸ್ಸಿಗೆ ಕಾರಣರಾದರು. ಅಂದಿನಿಂದ ತಮ್ಮ ಜೀವನದ ಕೊನೆಯವರೆಗೂ, ಮಧ್ಯೆ ಅವರು ಮಂತ್ರಿಗಳಾಗಿದ್ದ ಎರಡು ವರ್ಷ ಬಿಟ್ಟು, ಆ ಪತ್ರಿಕೆಯ ಸಂಪಾದಕರಾಗಿಯೇ ಇದ್ದರು.

ಕಾನೂನುಬದ್ಧ, ರಾಜಕೀಯಾಚರಣೆಯಲ್ಲಿ ತೀವ್ರ ವಿಶ್ವಾಸವಿಟ್ಟಿದ್ದ ಅವರು ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಕಟುವಾಗಿ ವಿರೋಧಿಸುತ್ತಿದ್ದರು; ಆಳುತ್ತಿದ್ದ ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯನ್ನೂ ತೀಕ್ಷ್ಣವಾಗಿ ಟೀಕಿಸುತ್ತಿದ್ದರು.

ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರು ತಮ್ಮ ಸಂಪಾದಕೀಯ ಸ್ವಾತಂತ್ರ್ಯವನ್ನು ಧೈರ್ಯದಿಂದ ಎತ್ತಿಹಿಡಿದರು. ಪತ್ರಿಕಾ ಸಂಸ್ಥೆಯ ನಿರ್ದೇಶಕರಾಗಿದ್ದ ಮದನ ಮೋಹನ ಮಾಲವೀಯ ಹಾಗೂ ಮೋತಿಲಾಲ್ ನೆಹ್ರು ಅವರು ಪತ್ರಿಕೆಯ ಧೋರಣೆಯನ್ನು ರಾಷ್ಟ್ರೀಯ ಕಾಂಗ್ರೆಸಿನ ಕಡೆಗೆ ವಾಲಿಸಬೇಕೆಂದು ಪ್ರಯತ್ನ ಪಟ್ಟಾಗ ಅವರೊಂದಿಗೂ ಸೆಣಸಿ, ತಮ್ಮ ಸಂಪಾದಕೀಯ ಸ್ವಾತಂತ್ರ್ಯವನ್ನುಳಿಸಿಕೊಂಡು ಪತ್ರಿಕೆಯ ಲಿಬರಲ್ ಪಕ್ಷದ ಧೋರಣೆಯನ್ನೇ ಮುಂದುವರಿಸಿಕೊಂಡು ಬಂದರು. ಒಮ್ಮೆ ಅವರು ನ್ಯಾಯಾಲಯ ನಿಂದನೆಯ ಆಪಾದನೆಗೆ ಗುರಿಯಾದಾಗ, ವಿಧಿಸಲಾದ ಜುಲ್ಮಾನೆಯನ್ನು ತೆತ್ತರೇ ವಿನಾ ಕ್ಷಮಾಪಣೆ ಕೇಳಿಕೊಳ್ಳಲಿಲ್ಲ.

ಲಿಬರಲ್ ಪಕ್ಷದ ನಾಯಕರಲ್ಲೊಬ್ಬರಾಗಿ ಚಿಂತಾಮಣಿಯವರು ರಾಜಕೀಯದಲ್ಲೂ ಖ್ಯಾತನಾಮರಾದರು. 1916-1923ರಲ್ಲಿ, ಮತ್ತು 1927-36ರಲ್ಲಿ, ಸಂಯುಕ್ತ ಪ್ರಾಂತ್ಯಗಳ(ಈಗಿನ ಉತ್ತರ ಪ್ರದೇಶ) ವಿಧಾನಸಭೆಯ ಸದಸ್ಯರಾಗಿದ್ದರು. 1921-1923ರಲ್ಲಿ ಪ್ರಾಂತ್ಯ ಸರ್ಕಾರದ ಶಿಕ್ಷಣ ಹಾಗೂ ಕೈಗಾರಿಕೆ ಮಂತ್ರಿಯಾಗಿ ಕೆಲಸ ಮಾಡಿದರು. 1918-1920ರಲ್ಲಿ ಅವರು ಭಾರತದ ರಾಷ್ಟ್ರೀಯ ಲಿಬರಲ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾಗಿದ್ದರಲ್ಲದೆ 1920ರಲ್ಲೂ 1931ರಲ್ಲೂ ಅದರ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. 1930-31ರಲ್ಲಿ ಲಂಡನಿನಲ್ಲಿ ಸೇರಿದ್ದ ದುಂಡು ಮೇಜಿನ ಪರಿಷತ್ತಿನಲ್ಲಿ ಚಿಂತಾಮಣಿಯವರು ಭಾರತದ ಬ್ರಿಟಿಷ್ ಪ್ರಾಂತ್ಯಗಳ ಪ್ರತಿನಿಧಿಗಳಲ್ಲೊಬ್ಬರಾಗಿ ಭಾಗವಹಿಸಿದ್ದರು.

ಅಸಾಧಾರಣ ಜ್ಞಾಪಕಶಕ್ತಿ, ಇಂಗ್ಲಿಷ್ ಭಾಷೆಯ ಮೇಲೆ ಅಕುಂಠಿತ ಪ್ರಭುತ್ವ, ಕಾನೂನುಬದ್ಧ ರಾಜಕಾರಣದಲ್ಲಿ ಅಚಲ ವಿಶ್ವಾಸ, ತಾವು ನಂಬಿದ ತತ್ತ್ವಗಳಲ್ಲಿ ಅತೀವ ನಿಷ್ಠೆ, ಯಾವ ಪ್ರಲೋಭನಕ್ಕೂ ಒಲಿಯದ, ಯಾವ ಸೆಳೆತಕ್ಕೂ ಮಣಿಯದ ಕೆಚ್ಚೆದೆ, ಇವುಗಳಿಂದ ಚಿಂತಾಮಣಿಯವರು ಸಮಕಾಲೀನ ರಾಜಕೀಯ ರಂಗದಲ್ಲಿ ಒಂದು ಪ್ರತಿಷ್ಠಿತ ಸ್ಥಾನ ಪಡೆದಿದ್ದರು.
ಚಿಂತಾಮಣಿಯವರು ಇಂಗ್ಲಿಷಿನಲ್ಲಿ ಉಜ್ವಲ ಭಾಷಣಕಾರರೂ ಪ್ರತಿಭಾನ್ವಿತ ಲೇಖಕರೂ ಆಗಿದ್ದರು. ಅವರ ಪುಸ್ತಕಗಳಲ್ಲಿ ಮುಖ್ಯವಾದವು ಇವು: ಇಂಡಿಯನ್ ಸೋಷಿಯಲ್ ರಿಫಾರ್ಮ್ (1901), ಇಂಡಿಯನ್ ಪಾಲಿಟಿಕ್ಸ್ ಸಿನ್ಸ್ ದಿ ಮ್ಯೂಟಿನಿ (1937). ಫಿರೋಜ್ ಷಾ ಮೆಹ್ತಾರವರ ಭಾಷಣ ಲೇಖನಗಳ ಸಂಗ್ರಹವನ್ನೂ ಅವರು ಪ್ರಕಟಿಸಿದ್ದಾರೆ (1905).
1939ರಲ್ಲಿ ಚಿಂತಾಮಣಿಯವರು ಬ್ರಿಟಿಷ್ ಚಕ್ರವರ್ತಿಯಿಂದ ನೈಟ್ ಪದವಿ ಪಡೆದಿದ್ದರು.
(ಟಿ.ಎಸ್.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ